ದಾಸಸಾಹಿತ್ಯದ ಪ್ರಸ್ತುತತೆ

ಹರಿದಾಸ ಸಾಹಿತ್ಯವು ಕನ್ನಡ ಸಾಹಿತ್ಯದ ತವನಿಧಿಗಳಲ್ಲೊಂದು. ಕನ್ನಡ ಆರ್ಷೇಯವಾಣಿ, ಕನ್ನಡ ಪೌರಾಣಿಕ ಸಂಪತ್ತು, ಪುರಾಣತ್ರಯ ಪ್ರವಚನತ್ರಯಗಳ ಸರಳೀಕೃತ ಅಮೃತಧಾರೆ ಪುರಂದರೋಪನಿಷತ್ತು. ಸುಧಾ ಓದಿ ಪದ ಹಾಡಿದರು ಹೀಗೆಲ್ಲ ಕಳೆದ 600 ವರ್ಷಗಳಿಂದ ನಮ್ಮೆಲ್ಲರ ನುಡಿನಾಲಿಗೆಯ ಮೇಲೆ ನಲಿಯಿತ್ತಿರಲು ಕಾರಣ ಈ ಸಾಹಿತ್ಯದಲ್ಲಿ ಕಾಲಕಾಲಕ್ಕೆ ಆಗುತ್ತಿರುವ ಪ್ರಸ್ತುತೀಕರಣ. ಶ್ರೀ ಶ್ರೀಪಾದರಾಜರು, ಶ್ರೀ ವ್ಯಾಸರಾಯರು, ಶ್ರೀ ರಾಘವೇಂದ್ರ ಸ್ವಾಮಿಗಳವರು ತಮ್ಮ ತಮ್ಮ ಕಾಲಖಂಡದಲ್ಲಿ ದಿಟ್ಟ ಹೆಜ್ಜೆ ಇಡುವುದರ ಮೂಲಕ ಮಠದಲ್ಲಿ ಪ್ರವೇಶ ನೀಡಿದರು. ಅದರಂತೆ ಸುಬೋಧರಾಮರಾವ್, ಪಾವಂಜಿ ಗುರುರಾವ್, ಗೋರೆಬಾಳ್ ಹನುಮಂತರಾಯರು ಸಂಪಾದನೆ ಮೂಲಕ ಕೃತಿ ರೂಪದಲ್ಲಿ ತಂದರು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಡಾ. ಜಿ. ವರದರಾಜರಾವ್, ಡಾ. ಕೆ. ಎಂ. ಕೃಷ್ಣರಾವ್, ಡಾ. ಎ.ಟಿ. ಪಾಟೀಲರು, ಪ್ರೊ. ವಸಂತ ಕುಷ್ಟಗಿ, ಅಂತಹ ಹಿರಿಯ ತಲೆಮಾರಿನ ಸಂಶೋಧಕರಿಂದ ದಾಸ ಸಾಹಿತ್ಯವು ವಿಶ್ವವಿದ್ಯಾಲಯಗಳಲ್ಲಿ ಒಂದು ಪಠ್ಯಕ್ರಮವಾಗುವಂತೆ ಅದಕ್ಕೆ UGC, Ph.D, JRF, SRF, B.O.S, Academic Council Projects, ಮೊದಲಾದ ಬೇರೆಲ್ಲ ವಿಷಯ ಮತ್ತು ಭಾಷೆಗಳಿಗೆ ಸಿಗುವಂತೆ ದರ್ಜೆ, ಸೌಲಭ್ಯ, ಅನುದಾನ ದೊರೆಯಿತು.

ಇನ್ನು ಸಾಮಾಜಿಕ ಸ್ತರದಲ್ಲಿ ಹೇಳುವುದಾದರೆ ಶ್ರೀ ಬೇಲೂರು ಕೇಶವದಾಸರಿಂದ ಮೊದಲುಗೊಂಡು ನೂರಾರು ಭಕ್ತರು ಸಹಸ್ರಾರು ಮಾತೆಯರ ಗಾಯನ, ಪ್ರಕಟಣೆ, ಪ್ರಚಾರ ಪ್ರಸಾರದ ಕಾರ್ಯದಲ್ಲಿ ತೊಡಗಿದ್ದಾರೆ. ಹರಿದಾಸ ಸಾಹಿತ್ಯವು ರಾಯಚೂರು ಜಿಲ್ಲೆಯ ಕೃಷ್ಣ ಹಾಗೂ ತುಂಗಾನದಿಗಳ ಸೇಚನದಿಂದ ಬೆಳೆದಿದೆಯಾದರೂ ಈ ಅರ್ಧಶತಮಾನದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಮಠಗಳ ಸ್ಥಾಪನಾಕಾರ್ಯ ವಿಸ್ತಾರವಾದಂತೆ ಅವುಗಳನ್ನು ಕೇಂದ್ರಗಳನ್ನಾಗಿ ಮಾಡಿಕೊಂಡು ಗುರುವಾರದ ಭಜನೆ, ಆದಿವಾರದ ಸತ್ಸಂಗ, ಅಧಿಕಮಾಸ, ಹೂವಳ್ಳಿ, ಏಕಾದಶಿ, ನವರಾತ್ರಿ, ಶ್ರಾವಣಮಾಸ, ವಿಶೇಷ ಹಬ್ಬಹರಿದಿನಗಳು, ಸಂಗೀತ ಕಛೇರಿಗಳು, ಜಾತ್ರೆ ಉತ್ಸವಗಳು, ಪುಣ್ಯತಿಥಿ, ಆರಾಧನೆಗಳು ಹೀಗೆಲ್ಲ ಸಹಸ್ರಾರು ಸಂದರ್ಭಗಳಲ್ಲಿ ಕೀರ್ತನೆಗಳನ್ನು ಹಾಡುವ, ನರ್ತಿಸುವ ಕ್ರಮದಿಂದಾಗಿ ಇಂದಿಗೂ ಎಲ್ಲರ ಮನೆಗಳಲ್ಲಿ ಮನಗಳಲ್ಲಿ ಉಳಿದುಕೊಂಡು ಬಂದಿದೆ. ಇತ್ತೀಚೆಗೆ ಕೇಳಿದ ಮಾತೆಂದರೆ ಲತಾ ಮಂಗೇಶ್ಕರರ ಹಾಡು ಜಗತ್ತಿನಲ್ಲಿ ಯಾವಾಗಲೂ ಎಲ್ಲಿಯಾದರೂ, ಯಾರಾದರೂ ಹಾಡುತ್ತಲೇ ಇರುತ್ತಾರೆ, ಅಂದರೆ ಗಾನ ಕೋಗಿಲೆಯ ಹಾಡು ಜಗತ್ತಿನಲ್ಲಿಲ್ಲದ ಕ್ಷಣವಿಲ್ಲ. ಅದರಂತೆ ಕರ್ನಾಟಕದಲ್ಲಿ ದಾಸರ ಕೀರ್ತನೆಗಳನ್ನು ಕೇಳದ ದಿನವೇ ಇಲ್ಲ ಎಂದರೆ ನಮ್ಮ ರಾಜ್ಯದ ಮಟ್ಟಿಗೆ ಅತಿಶಯೋಕ್ತಿ ಅಲ್ಲ. ಈ ಎಲ್ಲದರ ಜೊತೆಗೆ ಭೂವೈಕುಂಠವೆನಿಸಿದ ತಿರುಪತಿಯಲ್ಲಿ ಆ ತಿಮ್ಮಪ್ಪನ ಮಹಿಮೆಯಿಂದ ಕಳೆದ 25 ವರ್ಷಗಳಿಂದ ದಾಸ ಸಾಹಿತ್ಯದ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ. ಹೊಸ ಹೊಸ ಯೋಜನೆಗಳು ಸಾಧನೆಗಳು ನಡೆದಿವೆ. ಭದ್ರಗಿರಿ ಸಹೋದರರು, ಪಂಡಿತ್ ಭೀಮಸೇನ್ ಜೋಶಿ, ಶ್ರೀ ವಿದ್ಯಾಭೂಷಣರು, ಶ್ರೀ ಪುತ್ತೂರು ನರಸಿಂಹ ನಾಯಕ, ಶ್ರೀ ಶೇಷಗಿರಿದಾಸ, ಶ್ರೀ ಅನಂತ ಕುಲಕರ್ಣಿ ಹೀಗೆ ನೂರಾರು ಜನ ಸಂಗೀತ ವಿದ್ವಾಂಸರು, ವಿದೂಷಿಯರು, ಕ್ಯಾಸೆಟ್, ಸಿ.ಡಿ, ಫ್ಲಾಪಿ ಇತ್ತೀಚೆಗೆ ಅದಕ್ಕಾಗಿಯೇ ವೆಬ್‍ಸೈಟ್ ಮೊದಲಾದ ಅತ್ಯಾಧುನಿಕ ಉಪಕರಣಗಳ ಸಹಾಯದಿಂದ ಸಾಹಿತ್ಯದ ಪ್ರಚಾರ ಶ್ರವಣ ತನ್ಮೂಲಕ ಸಾಮಾಜಿಕ ಶಾಂತಿ ನೆಮ್ಮದಿ ಬರುತ್ತಿದೆ. ಇದಕ್ಕೆ ಕಾರಣ ದಾಸರು ಹೇಳಿದಂತೆ ಕಲಿಯುಗದಲ್ಲಿ ಹರಿನಾಮವು ನೆನೆದರೆ ಕುಲ ಕೋಟಿಗಳು ಉದ್ಧರಿಸುವವು. ಸಂಸ್ಕøತ ಬಾರದೇ ಇರುವುದು, ಸಮಯ ಸ್ಥಳ ಮತ್ತು ಆದಾಯದ ಅಭಾವದ ಮಧ್ಯದಲ್ಲಿರುವ ಜನಸಾಮಾನ್ಯರಿಗೆ ಸಂಸ್ಕøತಿ, ಸ್ವಾವಲಂಬನೆ ಮತ್ತು ಸಹಬಾಳ್ವೆ ಪ್ರೇರೇಪಿಸುವ ಏಕಮಾತ್ರ ಸಾಧನವೆಂದರೆ ದಾಸಸಾಹಿತ್ಯ ವೇದಕಾಲ, ಇತಿಹಾಸಕಾಲ, ಪುರಾಣಕಾಲ, ಲೋಹಯುಗ ಇವೆಲ್ಲವನ್ನೂ ನಮ್ಮ ಸಮಾಜ ದಾಟಿ ಬಂದಿದೆ. ಹೊಸ ದೃಷ್ಟಿಯಲ್ಲಿ ಹೇಳುವದಾದರೆ ಜಗತ್ತಿನಲ್ಲಿ ಔದ್ಯೋಗಿಕ ಕ್ರಾಂತಿಯಾದಾಗ ನಮ್ಮ ದೇಶ ಗುಲಾಮಗಿರಿಯಲ್ಲಿತ್ತು. ಅಣುಶಕ್ತಿ ಕ್ರಾಂತಿಯಾದಾಗ ಅಲ್ಪಸ್ವಲ್ಪ ಎಚ್ಚೆತ್ತಿತ್ತು. ಕಂಪ್ಯೂಟರ್ ಕ್ರಾಂತಿ ಬಂದಾಗ ಅಲ್ಪಸ್ವಲ್ಪ ನಮ್ಮ ಕಿಟಕಿ ಬಾಗಿಲುಗಳನ್ನು ಪೂರ್ವಾಗ್ರಹ ಪೀಡೆ ಇಲ್ಲದೆ ತೆರೆದಿಟ್ಟ ಕಾರಣ ನಾವು ಇಂದು ಈ ವೇಗದ ಜಗತ್ತಿಗೆ ಬಂದು ತಲುಪಿದ್ದೇವೆ. ಇಂದು ಹೆಚ್ಚು ಕಡಿಮೆ ಹೇಳುವದಾದರೆ ಭಾಗಶಃ ಸಮಯದ ಕೊರತೆಯೊಂದು ಬಿಟ್ಟರೆ ಬೇರೆ ಯಾವ ಕೊರತೆಯೂ ಇಲ್ಲ. ಒಂದು ವೇಳೆ ಇದ್ದರೂ ಅದು ಮುಂಬರುವ ದಿನಗಳಲ್ಲಿ ತುಂಬಿಕೊಳ್ಳುವ ವಿಶ್ವಾಸದಿಂದಲೇ ನಾವು ಬದುಕುತ್ತಿದ್ದೇವೆ. ಇಂದು ಶೇಖರಣೆಯ ಕೊರತೆ ಇಲ್ಲ, ಆಚರಣೆಯ ಕೊರತೆ ಇದೆ.

ಸಮಾಜದಲ್ಲಿ ಆದ ಪ್ರಮುಖ ಬದಲಾವಣೆಗಳೆಂದರೆ ಅವಿಭಕ್ತ ಕುಟುಂಬಗಳು One child family ಗಳಾಗಿವೆ. ಸ್ನಾನದ ಮನೆಗಳು Attached bathroom  ಗಳಾಗಿವೆ. 16 ದಿನಗಳಷ್ಟು ನಡೆಯುವ ಮದುವೆಯ ಜೀವನದ ದೊಡ್ಡ ಸಂಸ್ಕಾರವೇ one day match with limited overs ನಂತೆ ಆಗಿದೆ. ಹೀಗಿರುವಾಗ Bad light, pitch fault ನಂತಹ risk ಇದ್ದೇ ಇದೆ. 

ಇನ್ನು ವ್ಯವಹಾರ ಕಸುಬು ಜೀವನಕ್ರಮ, ಓಡಾಟ, ಕೃಷಿ, ವಿಜ್ಞಾನ, ತಂತ್ರಜ್ಞಾನ, ಬಯೋಟೆಕ್, ವ್ಯಾಪಾರ ವಹಿವಾಟಿನಲ್ಲಿ ಆದ ಬದಲಾವಣೆಗಳೋ ಊಹೆಗೆ ಮೀರಿದೆ. ಈ ಸಹಸ್ರಮಾನದಲ್ಲಿ ಜ್ಞಾನ, ಭಕ್ತಿ, ವೈರಾಗ್ಯದ ಸಾಧನೆ, ತನು, ಮನ, ಧನದಿಂದ ಸೇವೆ, ಸಾತ್ವಿಕತೆ, ಸದಾಚಾರ, ಇತಿಹಾಸ, ಸಂಸ್ಕøತಿ, ಸಂಗೀತ, ಸತ್ಸಂಗ ಇಂತಹವು ನಡೆಯಲಾರದ ನಾಣ್ಯಗಳಂತಾಗಿವೆ. ಅಥವಾ ದುಬಾರಿ ಹಣ ಕೊಟ್ಟು ಇವುಗಳನ್ನು ನೈಪುಣ್ಯ ಹೊಂದಿದ ಪ್ರೊಫೇಷನಲ್ಸ್ ಹತ್ತಿರ ಹಣ ಕೊಟ್ಟು ಕಲಿಯಬೇಕಾದ ಮತ್ತು ಕೌನ್ಸಲಿಂಗ್ ಪಡೆಯಬೇಕಾದ ಕಾಲ ಬಂದಿದೆ. ಇದಕ್ಕೆ ಕಾರಣ ನನಗೆ ತಿಳಿದಂತೆ ಈ ಕೆಳಗಿನ ಅಂಶಗಳು,  WTO. GATT, LPG, MNC, Use & Through, CTBT, Rural, Border, Backward, NRI, foreign Banks, Patents, Food processing, Structural Changes, careerism, CET  Credit Card, ATM, Cell Phones, Pollution, Terrorism, Multimedia, Unemployment, under employment, ADS, cancer. ನಮಗೆ ಬೇಕೋ ಬೇಡವೋ, ಒಳ್ಳೆಯದೋ ಕೆಟ್ಟದೋ, ತಿಳಿದೋ, ತಿಳಿಯದೆಯೋ ಈಗ ಇವೆಲ್ಲವೂ ಬಂದು ಬಿಟ್ಟಿವೆ. ಈ ಪ್ರತಿಯೊಂದು ಶಬ್ದದ ಹಿಂದೆ ಅದರದೇ ಆದ ತತ್ವ, ಜಾಲ, ವಿಚಾರ, ಆಚಾರ, ಹೀಗೆಲ್ಲ code of service ಇದ್ದೇ ಇವೆ. ನಾವು ಖಂಡಿತ ಇವುಗಳ ಸೌಲಭ್ಯ ಪಡೆಯಲೇ ಬೇಕು. ಇನ್ನು ಕೆಲವುಗಳನ್ನು ದೂರವಿಡಬೇಕು ಅಥವಾ ಕಡಿಮೆ ಮಾಡಬೇಕು, ಕೆಲವೊಂದರ ಬಗ್ಗೆ ಎಚ್ಚರ ಇರಬೇಕು., ಒಟ್ಟಿನಲ್ಲಿ ನಾವು ಶಾಂತಿ ಹಾಗೂ ನೆಮ್ಮದಿಯನ್ನು ಅಭಿವೃದ್ಧಿಯ ಹೆಸರಿನಲ್ಲಿ ಕ್ರಮೇಣ ಕಳೆದುಕೊಳ್ಳುತ್ತಿದ್ದೇವೆ. ಅಭಿವೃದ್ಧಿಯು ಬೇಕು, ನೆಮ್ಮದಿಯು ಬೇಕು ಇಲ್ಲವಾದರೆ ನಮ್ಮ ಸಮಾಜ ಹಿಂದೇ ಬೀಳುತ್ತದೆ. ಏಕೆಂದರೆ ಈ ದೇಶದ ಅಭಿವೃದ್ಧಿಯ ಸಮೃದ್ಧಿಯ ಜವಾಬ್ದಾರಿ ನಮ್ಮ ಮೇಲೆಯೇ ಇದೆ. ಅದನ್ನು ತೂಗಿಸುವುದೇ ನಮ್ಮ ಇಂದಿನ ವಿವೇಕ.

ಯದ್ಯದಾಚರತೆ ಶ್ರೇಷ್ಟಃ ತತ್ತದೇವೇತರೋ ಜನಃ

ಹೀಗಾಗಿ ಲೋಕವು ಸುಶೀಕ್ಷಿತರನ್ನು ಅನುಸರಿಸುತ್ತದೆ. ಈ ಎಲ್ಲವುಗಳೂ ಶ್ರೀ ವಿಷ್ಣುಪ್ರೇರಣೆಯಾ ಶ್ರೀ ವಿಷ್ಣುಪ್ರೀತ್ಯರ್ಥಂ ಎಂದು ಮಾಡುವದರಲ್ಲಿಯೇ ಮತ್ತು ಮಾಡಬಾರದ್ದನ್ನು ಸಾಧ್ಯವಾದಷ್ಟು ತಡೆಯುವುದರಲ್ಲಿಯೇ ನಮ್ಮ ಸಮಾಜದ ಸುಧಾರಣೆ ಮತ್ತು ಶ್ರೇಯಸ್ಸಿದೆ. ನಾವು ನಮ್ಮ ನಿತ್ಯ ಜೀವನದ ಸತ್ಯ ಘಟನೆಗಳನ್ನು ಮಾಡುವಾಗ ಎಷ್ಟೋ ಸಲ ಅನಿವಾರ್ಯವಾಗಿ ತಪ್ಪು ಮಾಡುವ ಸಂದರ್ಭಗಳು ಬರಬಹುದು, ಅಂತಹ ತಪ್ಪನ್ನು ಮಾಡದಂತೆ ನಮ್ಮ ಧಿಯೋಯೋನಃ ಪ್ರಚೋದಯಾತ್ ಇದ್ದೇ ಇದೆ. ಅದನ್ನು ನಾವು ದಿನಾಲೂ ಮಾಡಿದರೆ ಅದೇ ಆಚರಣೆ.

ಅಪಿ ಚೇತ್ಸುದುರಾಚಾರೋ ಭಜತೇ ಮಾಮನನ್ಯಭಾಕ್

ಸಾಧುರೇವ ಸ ಮಂತವ್ಯಃ ಸಮ್ಯಗ್ವ್ಯವಸಿತೋ ಹಿ ಸಃ”  ಭಗವದ್ಗೀತೆ 9/30

ಅಷ್ಟೆ ಅಲ್ಲ ನನ್ನನ್ನು ಒಮ್ಮೆ ಶರಣಾಗತ ತತ್ವದಿಂದ ನಂಬಿ ನೆನೆದರೆ ಸಾಧುಗಳಿಗೆ ಕೊಡುವ ಸಾಯುಜ್ಯ ಮೋಕ್ಷ ಕೊಡುವೆನೆಂದು ಆಣೆ ಮಾಡಿ ಹೇಳಲು ಕೃಷ್ಣನು ಅರ್ಜುನನಿಗೆ ಬೋಧಿಸುತ್ತಾನೆ.

ನನ್ನನ್ನು ನಂಬಿದ ಭಕ್ತರಿಗೆ ಕಷ್ಟವಿಲ್ಲ ಇದನ್ನೇ ದಾಸರು ನಂಬಿ ಕೆಟ್ಟವರಿಲ್ಲವೋ ರಂಗನ ನಂಬದೆ ಕೆಟ್ಟರೆ ಕೆಡಲಿ ಎಂದು ಹೇಳಿದ್ದಾನೆ.

ನರಜನ್ಮ ಬಂದಾಗ ನಾಲಗೆ ಇರುವಾಗ ಕೃಷ್ಣ ಎನಬಾರದೇ

ಕೃಷ್ಣ ಎಂದರೆ ಕಷ್ಟವು ಪರಿಹಾರ ಕೃಷ್ಣ ಎನಬಾರದೇ

ಈ ಹಾಡಿನಲ್ಲಿ ದಾಸರು ನಮಗೆ ಎಷ್ಟೊಂದು ಮುಕ್ತ ಅವಕಾಶಗಳನ್ನು ಕೊಡುತ್ತಾರೆ.

ದಾರಿ ನಡೆಯುವಾಗ, ಭಾರ ಹೊರುವಾಗ, ಮಂದಗಾಮಿನಿಯೊಡನೆ ಸರಸವಾಡುವಾಗ, ಕಂದನ ಬಿಗಿದಪ್ಪಿ ಮುದ್ದಾಡುವಾಗ, ಕೊನೆಗೆ ಮನೆಯೊಳಗೆ ಸುಳಿದಾಡುವಾಗ ಏನೂ ಆಗದೇ ಇದ್ದಲ್ಲಿ ಪರಿಪರಿ ಕೆಲಸದೊಳಗೆ ಒಂದು ಕೆಲಸವೆಂದು ತಿಳಿದು ಕೃಷ್ಣನನ್ನು ನೆನೆಯಲು ದಾಸರು ಬಹಳ ಆತ್ಮೀಯತೆಯಿಂದ ಹೇಳಿದ್ದಾರೆ. ನಾವು ನಮ್ಮ Stress, Strain, Tension, Commitment, Competition  ಗಳಲ್ಲಿ ಕೃಷ್ಣನನ್ನು ಮರೆತ ಪರಿಣಾಮವೇ ಈ ಕೆಳಗಿನ ಪದ್ಯ ತಿಳಿಸುತ್ತದೆ.  

“ರಮಾಧವನ ಒಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ” ಎಂದು ಹೇಳಿದ ಜಗನ್ನಾಥ ದಾಸರ ಮಾತು ಎಂದೆಂದಿಗೂ ಪ್ರಸ್ತುತ.

ಸಮಾಜದಲ್ಲಿ ವಿವಾಹ ವಿಚ್ಛೇದನಗಳಿಗೆ ದಂಪತಿಗಳಲ್ಲಿಯ ತಪ್ಪು ತಿಳುವಳಿಕೆಗಳೇ ಕಾರಣ. ಅದನ್ನು ಅವರು ರಮಾಧವನ ಒಲಿಸಲರಿಯದೇ ಎಂದು ಹೇಳಿದ್ದು ಧ್ವನಿಪೂರ್ಣ. ವಿಷ್ಣುವನ್ನು ಬೇರೆ ಯಾವ ಹೆಸರಿನಿಂದ ಹೇಳದೇ ರಮಾಧವ ಎಂದರೆ, ಲಕ್ಷ್ಮೀಪತಿ ಅವನನ್ನು ಒಲಿಸಲಾಗದೆ ಎಂದರೆ, ಪತಿಯ ಸ್ವಭಾವವನ್ನು ತಿಳಿದುಕೊಳ್ಳದ ಲೌಕಿಕ ಪತ್ನಿಗೆ ವಿಚ್ಛೇದನದ ಭಯ ತಿಳಿದುಕೊಂಡವಳಿಗೆ ಸ್ವರ್ಗ ಸುಖ. ದಾಸರು ತಮ್ಮ ಜೀವನ ಧರ್ಮವನ್ನು ಹೇಳುತ್ತಾ ಸಾಲ ಮಾಡಬೇಡ, ಸಾಲದೆನಬೇಡ, ನಾಳೆ ಇಡಬೇಡ ಎಂದು ಹೇಳಿದರು. ಆದರೆ ಈಗ ಸಾಲವು ಜೀವನದ ಅವಿಭಾಜ್ಯ ಅಂಗ ATM Card, Credit Card, Cell Phone ಇಲ್ಲದವನು ಮಿಡಲ್ ಕ್ಲಾಸ್ ಮೆಂಟಾಲಿಟಿ ಪರ್ಸನ್ ಎಂದು ತಾತ್ಸಾರ ಅಥವಾ ಅನುಕಂಪದಿಂದ ನೋಡುತ್ತಾರೆ. ಹಾಗಾದರೆ ಸುಧಾರಣೆ ಹೇಗೆ? ನಮ್ಮ ವಸ್ತು ಹಾಗೂ ಸೇವೆಗಳ ಉತ್ಪಾದನೆ ಹೆಚ್ಚಾಗಬೇಕು, ಅವುಗಳ ಹಂಚಿಕೆ ಸರಿಯಾಗಿ ಆಗಬೇಕು. ಕೌಟಿಲ್ಯ ಹೇಳಿದಂತೆ ಸುಖದ ಮೂಲ ಧರ್ಮ ಹೊರತು ವಸ್ತು ಅಲ್ಲ ಎಂದು ತಿಳಿದುಕೊಂಡು ವಸತುಗಳ ಹಂಚಿಕೆ ಸರಿಯಾಗಿ ಆಗಬೇಕು. ಶೇಖರಣೆ, ಸಂಗ್ರಹಣೆ ಸಲ್ಲದು.  

ಶ್ರೀ ಸೂಕ್ತದಲ್ಲಿ ಬರುವ “ಪ್ರಾದುರ್ಭೂತೋಸ್ಮಿರಾಷ್ಟ್ರೇಸ್ಮಿನ್ ಕೀರ್ತಿವೃದ್ಧಿಂ ದದಾತುಮೆ” ನಾನು ಈ ರಾಷ್ಟ್ರದಲ್ಲಿ ಹುಟ್ಟಿದ್ದೇನೆ. ನನಗೆ ಕೀರ್ತಿ ಮತ್ತು ವೃದ್ಧಿಯಾಗಲು ನಿನ್ನ ಸಹಾಯ ಬೇಕು. ನಾನು Human resource ಅಲ್ಲ resourceful human being ಆಗಬೇಕು. ಏಕೆಂದರೆ, ಪ್ರಜಾಪ್ರಭುತ್ವದಲ್ಲಿ ನಾನು ಮತ್ತು ನನ್ನಂತಹ ಕೋಟ್ಯಾಂತರ ಪ್ರಜೆಗಳೇ ಇಲ್ಲಿಯ ಎಲ್ಲಾ ಸಂಪತ್ತಿನ ಪ್ರಭುಗಳು. ನಮ್ಮೆಲ್ಲರನ್ನು ಸಂಪದ್ಭರಿತರನ್ನಾಗಿ ಮಾಡಲು ನಿನ್ನನ್ನು ಪ್ರಾರ್ಥಿಸುವೆ.

“ರೋಹಂತುಸರ್ವಭೀಜಾನ್ಯವಬ್ರಹ್ಮದ್ವಿಷೋದ್‍ಜಹಿ” ನಾನು ಬಿತ್ತಿದ ಎಲ್ಲ ಬೀಜಗಳು ಈ ಭೂಮಿಯಲ್ಲಿ ಫಲಿಸುವಂತಾಗಲಿ, (ಕೂರಿಗೆ ಪೂಜೆ) ಅದರಿಂದ ಈ ದೇಶದ ಹಸಿವೆ, ನೀರಡಕೆ ಮೊದಲಾದವುಗಳನ್ನು ಕೃಷಿ ಸಿರಿಯಿಂದ ನೀಗಿಸಿ ನಿನಗಿಮತ ಮೊದಲು ಹುಟ್ಟಿದ ದರಿದ್ರ ಲಕ್ಷ್ಮಿಯನ್ನು ತೊಲಗಿಸಲು ನಮಗೆ ನೀನು ಅನುಗ್ರಹಿಸು. “ಕ್ಷುತ್‍ಪಿಪಾಸಮಲಾಂಜೇಷ್ಠಾಮ ಅಲಕ್ಷ್ಮೀಂನಾಶಯಾಮ್ಯಹಂ” ಅದಕ್ಕಾಗಿ ದಾಸರು ಲಕ್ಷ್ಮೀ ದೇವಿಗೆ ಅಮ್ಮ, ಅಕ್ಕ, ತಾಯಿ, ದೇವಿ ಎಂದೆಲ್ಲಾ ಪ್ರಾರ್ಥಿಸುವರು, ಅದನ್ನು ಈ ಮುಂದಿನ ಒಂದು ಕೀರ್ತನೆಯ ಉದಾಹರಣೆಯಿಂದ ನೋಡುವ.

ಬಾರೆ ಭಾಗ್ಯದ ನಿಧಿಯೇ ಕರವೀರನ ವಾಸಿನ ಸಿರಿಯೆ

ಆಕಳು ಕರುವನು ಸ್ವೀಕರಿಸುವ ಪರಿ ನೀಕರುಣದಿ ಕಾಲ್ಹಾಕು ಮನೆಗೆ

ಎಂದು ಹೇಳಿ ಕ್ಷಮೆ ಕೇಳುತ್ತಾ ಒಂದು ವೇಳೆ ನನ್ನಿಂದೇನಾದರೂ ಅಪರಾಧಗಳಾದರೆ ಕ್ಷಮಿಸು ಎನ್ನುತ್ತಾ

ಮಗನಪರಾಧವ ತೆಗೆದೆಣಿಸದೆನೀ

ಲಗುಬಗೆಯಲಿ ಪನ್ನಾಗವೇಣಿ

ಎಂದು ಪ್ರಾರ್ಥಿಸುತ್ತಾರೆ. ಆಗಲಾದರೂ ಲಕ್ಷ್ಮೀ ಕರುಣೆ ತೋರದಿದ್ದರೆ ಕೊನೆಯಲ್ಲಿ ನೀನು ಸದ್ಯ ಎಲ್ಲಿ ಬೇಕಾದರೂ ಇರು, ಆದರೆ ಕಡೆಗೆ ನಮ್ಮ ಮನೆ ವಾಸ ಒಡೆಯ ಅನಂತಾದ್ರೀಶ

ಒಡೆಯನಿದ್ದಲ್ಲಿಗೆ ಮಡದಿ ಬರುವುದು

ರೂಢಿಗುಚಿತವಿದು ನಡೆ ನಮ್ಮ ಮನೆಗೆ

ಎಂದು ಚಂಚಲೆಯಾದ ಲಕ್ಷ್ಮೀಯನ್ನು ಪಡೆಯಬೇಕಾದಲ್ಲಿ ನಾರಾಯಣನನ್ನು ನಮ್ಮ ಹೃದಯ ಸನ್ನಿಧಾನದಲ್ಲಿ ಪಡೆದರೆ ಸಾಕು. ಲಕ್ಷ್ಮೀ ತಾನಾಗಿಯೇ ಬರುವಳು. ಇಲ್ಲವಾದರೆ ಅವಳ ಮಗ ಕರ್ದಮವನ್ನಾದರೂ ಕರೆದು ಸ್ವಲ್ಪ ಹೊತ್ತು ಇಟ್ಟುಕೊಂಡರೆ ಅವನ ಮೇಲಿನ ಮಮತೆಯೆಂದರೆ ಬಂದೇ ಬರುವಳೆಂದು ಶ್ರೀ ಸೂಕ್ತದ ಪ್ರಭಾವದಿಂದ ದಾಸರು ಹಾಡುತ್ತಾರೆ. ಆ ನಾರಾಯಣನ ಸನ್ನಿಧಾನದ ನಮ್ಮ ಹೃದಯವನ್ನು ಕುರಿತು

ತಸ್ಯಾ ಶಿಖಾಯಾ ಮಧ್ಯೆ ಪರಮಾತ್ಮ ವ್ಯವಸ್ಥಿತಾ

ಎಂದು ಪುರುಷಸೂಕ್ತ ಹೇಳುತ್ತದೆ. ಇದು ನಮ್ಮ ಸಮೃದ್ಧಿಯ ರಹಸ್ಯ ಹಂಚಿಕೆ, ರಹಸ್ಯಗಳನ್ನು ಉಪನಿಷತ್ತುಗಳು ಹೇಳುತ್ತವೆ.

ತೇನತೆಕ್ತೇನ ಭುಂಜಿತಾ

ಇದನ್ನೇ ದಾಸರು ಧರ್ಮಕ್ಕೆ ಕೈಬಾರದೀ ಕಾಲ

ಇಕ್ಕಲಾರೆ ಕೈ ಎಂಜಲು

ಎನ್ನುವ ಕೀರ್ತನೆಗಳಲ್ಲಿ ಇಂದಿನ ಬದುಕಿನ ಎಂದರೆ ನಿತ್ಯ ಜೀವನದ ಸತ್ಯ ಶೋಧವನ್ನು ಚಿತ್ರಿಸುತ್ತಾರೆ. ಘಳಿಕೆ ಮತ್ತು ಹಂಚಿಕೆಗಳು ಒಂದೇ ನಾಣ್ಯದ ಎರಡು ಮುಖಗಳು ಅದನ್ನು ಆಧ್ಯಾತ್ಮಿಕವಾಗಿ ಹಾಗೂ ಜೈವಿಕವಾಗಿ ಶ್ವಾಸೋಚ್ಛಾಸವೆಂದು ಹೇಳಿದ್ದಾರೆ.

ನಮ್ಮೆಲ್ಲರ ಹೃದಯಗಳಲ್ಲಿ ಒಡೆಯನಾದ ಲಕ್ಷ್ಮೀಪತಿಯನ್ನು ಇಟ್ಟುಕೊಂಡು ನವವಿಧ ಭಕ್ತಿಗಳಲ್ಲಿ ಯಾವುದಾದರೊಂದರಿಂದ ನೆನೆದರೆ ಸಾಕು. ಪಂಚಭಾವಗಳಲ್ಲಿ ಆವುದಾದರೊಂದು ಮಾಡಿದರೆ ಸಾಕು. ಮನುಷ್ಯನಿಗೆ ಕಣ್ಣು, ಮೆದುಳು, ಕಿಡ್ನಿ, ಲಂಗ್ಸ್ ಇವೆಲ್ಲವೂ ಕೈಕಾಲಿನಂತೆ ಎರೆಡೆರಡು ಇವೆ. ಆದರೆ ಹೃದಯವು ಮಾತ್ರ ಒಂದೇ ಇದೆ. ಅದಕ್ಕಾಗಿಯೇ ಹೆಂಡತಿಗೆ ಹೃದಯೇಶ್ವರಿ ಎಂದು ಹೇಳಿರುವುದು. ಇಲ್ಲವಾದರೆ, ಕಡ್ನೇಶ್ವರಿ ಮೊದಲಾಗಿ ಅನ್ನಬಹುದಾಗಿತ್ತಲ್ಲವೇ? ಇದು ಹಾಸ್ಯಕ್ಕಾಗಿ ಹೇಳಿದ ಮಾತಾದರೂ ಶಾಸ್ತ್ರಗಳಲ್ಲಿ ಹೃತ್ಪೂರ್ವಕ ಎಂಬ ಶಬ್ದಕ್ಕೆ ಬಹಳ ಮಹತ್ವವಿದೆ.

ದಾಸರು ಹೇಳಿದ ಜ್ಞಾನ ಮತ್ತು ಭಕ್ತಿಯ ಬಗ್ಗೆ ಸಮಯದ ಅಭಾವದಿಂದ ಇಲ್ಲಿಗೆ ನಿಲ್ಲಿಸಿ ಇನ್ನು ವೈರಾಗ್ಯದ ಬಗ್ಗೆ ಹೇಳುವುದಾದರೆ ಗೋಪಾಲದಾಸರು ಈ ಕೆಳಗಿನ ಪದ್ಯದಲ್ಲಿ ವೈರಾಗ್ಯದ ಬಗ್ಗೆ ಹೀಗೆ ಹೇಳುತ್ತಾರೆ.

ಸ್ವಯೋಗ್ಯತೆಯ ಆಯತದಲಿ ಅಪ್ಪುದುದನು

ನೋಯದೆ ಉಣ್ಣುವುದೇ ನ್ಯಾಯದ ವೈರಾಗ್ಯ

ಎಂದರೆ ವ್ಯಕ್ತಯೂ ತನ್ನ ಸ್ವರೂಪ, ಪ್ರವೃತ್ತಿ ಮತ್ತು ಯೋಗ್ಯತೆಗಳಿಗನುಗುಣವಾಗಿ ಲಭಿಸಿರುವುದನ್ನು ನೋಯದೇ ಉಣ್ಣುವುದು ಎಂದರೆ ಮತ್ಸರ ಪಡದೆ ಭೋಗಿಸುವುದು ನ್ಯಾಯದ ವೈರಾಗ್ಯ. ಇದನ್ನು ಹರಿಕೊಟ್ಟ ಕಾಲಕ್ಕೆ ಉಣಬೇಕು. ವೈರಾಗ್ಯದ ಹೆಸರಿನಲ್ಲಿ ಜಿಪುಣತನ ಬೇಡ. ಅದನ್ನು ಅನ್ಯಾಯದ ವೈರಾಗ್ಯ ಎಂದು ಹೇಳುತ್ತಾರೆ. ಹೀಗೆ ದಾಸ ಸಾಹಿತ್ಯದ ಪ್ರಸ್ತುತೀಕರಣ ಅದರಿಂದ ಸಾಮಾಜಿಕ ಸಂಬಂಧಗಳು, ವ್ಯವಹಾರ ವಹಿವಾಟುಗಳನ್ನು ಸುಧಾರಿಸಿಕೊಂಡು (Self Management Style) ಬದುಕಿದರೆ ಸಹಬಾಳ್ವೆಯಿಂದ ಒಂದು ಸಖಿ ಸಮಾಜ ನಿರ್ಮಿಸಿಕೊಳ್ಳಬಹುದು. ಸಂಗೀತದೊಂದಿಗೆ, ಕನ್ನಡದಲ್ಲಿ ಹಾಡಿರುವುದರಿಂದ ಅವು ಕೇಳಲೂ ತಿಳಿಯಲೂ ಬಹಳ ಸುಲಭ. ಈಗ ಬೇಕಾಗಿರುವುದು, ತಿಳುವಳಿಕೆ ಅಲ್ಲ ಆಚರಣೆಯ ಮುಚ್ಚಳಿಕೆ. ಅವರ ಕೃತಿಗಳಲ್ಲಿ ಕೆಲವು ರಾಚನಿಕ ವೈರುಧ್ಯಗಳು ಕಾಣುತ್ತವೆ. ಅವು ವಿವೇಕದ ಮಾತುಗಳು ಅಥವಾ ಕಿವಿ ಮಾತುಗಳು. ಅವು ಸಾಮಾಜಿಕ ವಿಘಟನೆಯ ಕಾಲದಲ್ಲಿ ಬದುಕಿ ಸಮಾಜದ ಏಳಿಗೆ ಬಯಸುವಲ್ಲಿ ಅವರಿಗೊದಗಿದ ಸವಾಲುಗಳು ಮತ್ತು ಅದನ್ನು ಎದುರಿಸಿದ ಅವರ ಸಮಾಜೋಶೈಕ್ಷಣಿಕ ಸಿದ್ಧತೆಗಳು. ಉದಾಹರಣೆಗಾಗಿ

“ಡಂಗೂರವ ಸಾರಿರಯ್ಯ ಡಿಂಗರೀಗರೆಲ್ಲರು ಭೂಮಂಡಲಕ್ಕೆ ಪಾಂಡುರಂಗ ವಿಠ್ಠಲನೆ ಪರದೈವವೆಂದು” ಎಂದು ಒಂದು ಕಡೆ ಹೇಳಿದರೆ ಇನ್ನೊಂದು ಕಡೆ ಮೆಲ್ಲನೇ ಮಾಧವನ ಮನವ ಮೆಚ್ಚಿಸಬೇಕು, ಬೆಲ್ಲವಾಗಿರಬೇಕು ಬಂಧು ಜನರೊಳಗೆ, ಇಲ್ಲಿ ವಿದ್ಯೆಗಿಂತಲೂ ವಿವೇಕದ್ದೇ ಮೇಲುಗೈ ಎಂಬ ಮಾತು ಬಿಡಿಸಿ ಹೇಳಬೇಕಾಗಿಲ್ಲ.  

ಎಲ್ಲಕ್ಕಿಂತ ಮುಖ್ಯವಾಗಿ ಅವರು ಇಂದಿನ ಸಮಾಜಕ್ಕೆ ಕೊಟ್ಟ ಬಹುಮುಖ್ಯ ಕೊಡುಗೆ ಎಂದರೆ ಈ ಕೆಳಗಿನ ಕೆಲವು ಹಾಡುಗಳು.

ಪಾಪಭೀತಿ, ಪ್ರಭುಭೀತಿ, ಪ್ರಜಾಭೀತಿ ಇಲ್ಲದೆ ಅಪರಾಧಗಳನ್ನು ಮಾಡುತ್ತಾ ಪ್ರಜಾಪ್ರಭುತ್ವದ ಅಡಿಯಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ಸರಿಪಡಿಸಲು ಆಗದೇ ಇರುವಾಗ ಇನ್ನು ಮುಂದೆಯಾದರೂ ದುಷ್ಟರಿಂದ ಆಗುವ ಭಯೋತ್ಪಾದನೆ ಬೃಹತ್ ಹಗರಣಗಳನ್ನು ತಪ್ಪಿಸಲು ಸಾತ್ವಿಕರಿಗೆ, ಸುಶೀಕ್ಷಿತರಿಗೆ, ಸದಾಚಾರಿಗಳಿಗೆ, ಪರೋಪಕಾರ ಮನೋಭಾವ ಉಳ್ಳ ಸಜ್ಜನರಿಗೆ ಈ ದೇಶದ ಸಮೃದ್ಧಿಗೆ, ಸಮಾಜದ ಒಳಿತಿಗಾಗಿ ಈ ಕೆಳಗಿನ ಕೋಷ್ಟಕ ಅಥವಾ Equation ಗಳನ್ನು ಕೊಡುತ್ತಾರೆ. ಇಂತಹ ಒಂದು  co-living scale ಉಪಯೋಗಿಸಿ live and let live ಎನ್ನುವ ತತ್ವದಿಂದ ಬಾಳಬಹುದು.

1.         ಧರೆಯೋಳು ದುರ್ಜನರು ಜಾಲಿಯ ಮರದಂತೆ

2.         ರೊಕ್ಕ ಎರಡಕ್ಕೂ ದುಃಖ

3.         ಮೂರ್ಖರಾದರು ಜನರು ಲೋಕದೊಳಗೆ

4.         ಆಚಾರವಿಲ್ಲದ ನಾಲಿಗೆ

5.         ಕುರುಡು ನಾಯಿ ಸಂತೆಗೆ ಬಂದಿತ್ತು

6.         ಮಾನವ ಜನ್ಮ ದೊಡ್ಡದು

7.         ಡೊಂಕು ಬಾಲದ ನಾಯಕರೆ

8.         ಕಲ್ಲು ಸಕ್ಕರೆ ಕೊಳ್ಳಿರೊ

9.         ನಿನ್ನ ಒಲುಮೆಯಿಂದ ಉನ್ನತವಾದ

10.       ಈಸಬೇಕು ಇದ್ದು ಜೈಸಬೇಕು

11.       ದಾನವನ ಕೊಂದದ್ದಲ್ಲವೋ

12.       ಅಜ್ಞಾನಿಗಳಕೂಡ ಅಧಿಕ ಸ್ನೇಹಕ್ಕಿಂತ

13.       ನಿಂದಕರಿರಬೇಕು ಇರಬೇಕು

14.       ತಲ್ಲಣಿಸದಿರು ಕಂಡ್ಯ ತಾಳು ಮನವೆ

15.       ಉದರ ವೈರಾಗ್ಯವಿದು

16.       ತಾಳುವಿಕೆಗಿಂತ ಅನ್ಯತಪವು ಇಲ್ಲ

17.       ಕಂಗಳಿದ್ಯಾತಕೋ ಕಾವೇರಿ ರಂಗನ್ನ ನೋಡದ

18.       ಎಲ್ಲರೂ ಮಾಡುವದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

ಒಟ್ಟಿನಲ್ಲಿ ದಾಸ ಸಾಹಿತ್ಯದ ಎಲ್ಲಾ ಸಚ್ಛಾಸ್ತ್ರ ವೇದೋಪನಿಷತ್ತುಗಳು ಭಾಗವತವೇ ಮೊದಲಾದ ಪುರಾಣಗಳ ಸಮಗ್ರ ಸಾರವನ್ನು ಪ್ರಸ್ತುತೀಕರಿಸಿ ಸಮಾಜ ಸುಧಾರಣೆಗಾಗಿ ತಮ್ಮ ಸೇವೆ ಮಾಡಿದ್ದಾರೆ. ಸಮಾಜದ ಅಭಿವೃದ್ಧಿಗೆ ವ್ಯಕ್ತಿಯ ಅಭಿವೃದ್ಧಿಯೇ ಮೂಲ. ಹಿಂದೆ ಯಜ್ಞ ಯಾಗಾದಿಗಳನ್ನು ಮಾಡಿ ಮಳೆ ಪಡೆದು ಸಮೃದ್ಧಿ ಹೊಂದುತ್ತಿರುವಂತೆ ಇಂದಿಗೂ ಭಕ್ತಿಯಿಂದ ದೇವರ ನಾಮಗಳನ್ನು ಹಾಡಿ ಕೇಳಿ ನೆನೆದು ಸುಖ ಶಾಂತಿಯನ್ನು ಪಡೆಯಬಹುದೆಂದು ಬಹಳ ಮಾರ್ಮಿಕವಾಗಿ ಹೇಳಿದ್ದಾರೆ. ಹೈದ್ರಾಬಾದ್ ಕರ್ನಾಟಕದವರು ಅದರಲ್ಲೂ ರಾಯಚೂರಿನ ತೊಟ್ಟಿಲಲ್ಲಿ ಬೆಳೆದ ದಾಸರು ವಿಶ್ವಸಂತರ ವಿರಳ ಪಂಕ್ತಿಯಲ್ಲಿ ನಿಲ್ಲಬಹುದಾದವರು. ಅವರ ಸಾಹಿತ್ಯದ ಸೌರಭವನ್ನು ಹೀರೋಣ, ಹಂಚೋಣ. ಅದರಲ್ಲೇ ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿ ಇದೆ. ದಾಸ ಸಾಹಿತ್ಯದಲ್ಲಿಯ ಸಾರ್ವತ್ರಿಕ ಅಂಶಗಳನ್ನು ಹೆಚ್ಚು ಪ್ರಸಾರ, ಪ್ರಚಾರ ಮಾಡಬೇಕು. ಅಂತಹ ಸಂದರ್ಭದಲ್ಲಿ ವಿಳಂಬ ಅಥವಾ ತೊಂದರೆಗಳಾದರೆ ಕಲ್ಲಾಗಿ ಇರಬೇಕು ಭವತೊರೆಯೊಳಗೆ ಎಂದು ಹೇಳಿದ್ದಾರೆ. ದಾಸರು ಸಮಾಜ ಸುಧಾರಕರಲ್ಲ ಆದರೆ ಸಮಾಜದ ವ್ಯಾಧಿಗೆ ಬೇಕಾದ ಸಿಧ್ಧೌಷಿಧಿಗಳು ಅವರ ಕೃತಿಗಳಲ್ಲಿವೆ. ಈ ದೇಶದ ಋಷಿ ಮುನಿಗಳು ಸಂತಮಹಂತರು ಮಾಡಿದಂತೆ ಕನ್ನಡ ನಾಡಿನಲ್ಲಿ ಶರಣರು, ದಾಸರು ಸಮಾಜ ಸುಧಾರಣೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ.

ದಾಸರು ಸಮಾಜದ ಮೇಲಿನ ಅಪಾರವಾದ ಕಳಕಳಿ ಹಾಗೂ ಲೋಕಾನುಭವದಿಂದ ಈ ಕೆಳಗಿನ ಅಂಶಗಳನ್ನು ಅಳವಡಿಸಿಕೊಂಡರು ಹಾಗೂ ಅಳವಡಿಸಿದರು. ಡಾಂಭಿಕ ಭಕ್ತಿಯ ಖಂಡನೆ, ನೈಜ ಭಕ್ತಿಯ ಪ್ರೇರಣೆ, ಸಹವಾಸದೋಷದ ದುಷ್ಫಲ, ಸತ್ಸಂಗದ ಮಹತ್ವ, ಹಣದ ಒಳಿತು ಕೆಡುಕುಗಳು, ಆಯುಷ್ಯದ ಸದುಪಯೋಗ, ಇವೆಲ್ಲವೂ ಪ್ರತಿಯೊಬ್ಬರಿಗೂ ಯಾವಾಗಲೂ ಅಗತ್ಯವಾಗಿ ತಿಳಿದಿರಬೇಕಾದ ಅಂಶಗಳು.

ಭಾಗವತ ಧರ್ಮ ಅನುಸರಿಸುವುದರ ಮೂಲಕ ಹರಿದಾಸರು ಸಮಾಜದಲ್ಲಿಯ ಸರ್ವದೇಶವು ಪುಣ್ಯದೇಶವು, ಸರ್ವಕಾಲವು ಪುಣ್ಯಕಾಲವು, ಸರ್ವಜೀವರು ದಾನಪಾತ್ರರು…………ಎಂದು ಹೇಳುತ್ತಾ ಸರ್ವರಿಗೂ ಸರ್ವರೊಂದಿಗೆ ಸಾರ್ವಕಾಲಿಕ ಸಹಬಾಳ್ವೆಯ ಗುಟ್ಟನ್ನು ತಿಳಿಸಿದರು. ಶ್ರೀಸೂಕ್ತದಲ್ಲಿ ಹೇಳಿದಂತೆ “ನಕ್ರೋಧೋ ನಚಮಾತ್ಸರ್ಯೋ, ನಲೋಭೋ ನ ಅಶುಭಮತಿಹಿ” ಎಮಬುದು ಇಂದು ಅತ್ಯಂತ ಅಗತ್ಯ. ಮಾನವ ಜನ್ಮ ದೊಡ್ಡದು, ಈಸಬೇಕು ಇದ್ದು ಜೈಸಬೇಕು, ಆದದ್ದೆಲ್ಲ ಒಳಿತೇ ಆಯಿತು, ಇಂದಿನ ದಿನವೇ ಶುಭದಿನವು. 

More Stories
The Historian and the Sauti